Ticker

6/recent/ticker-posts

ವಚನಗಳು - Vachanagalu

 ವಚನಗಳು ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಮುಂದಾಗಿ, ಚಳುವಳಿಯಾಗಿ ಬೆಳೆದು, ವಿಜೃಂಭಿಸಿ ಮುಂದೆ ಬರಲಿರುವ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಪಂಪನ ಕಾಲದಲ್ಲಿ ಬೆಳೆದದ್ದು ಜೇಡರ ದಾಸಿಮಯ್ಯ ವಚನಗಳ ಆದಿಪಯರಯಷನಾಗಿ ಬಸವಣ್ಣ, ಅಕ್ಕ, ಅಲ್ಲಮ ಮುಂತಾದವರಿಂದ ಬೆಳೆದ ಸಾಹಿತ್ಯ ಪ್ರಕಾರವಾಗಿದೆ‌. 

ಬಸವಣ್ಣ
ಸಾರ, ಸಜ್ಜನರ ಸಂಗವ ಮಾಡುವುದು 
ದೂರ, ದುರ್ಜನರ ಸಂಗ ಮಾಡುವುದು 
ಆವ ಹಾವಾದರೇನು? ವಿಷವೊಂದೆ! 
ಅಂಥವರ ಸಂಗ ನಮಗೆ ಬೇಡವಯ್ಯ. 
ಅಂತರಂಗ ಶುದ್ಧವಿಲ್ಲದವರ ಸಂಗ 
ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಯ್ಯ.
ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎನ್ನುವ ಮಾತಿನಂತೆ ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯವರ ಸಂಗದಲ್ಲಿಯೇ ಇರಬೇಕು. ಒಳ್ಳೆಯವರ ಅಥವಾ ಒಳ್ಳೆಯ ಚಾರಿತ್ರ ಹೊಂದಿರುವವರ ಜೊತೆ ಸಂಘ ಬೆಳೆಸಬೇಕು ಯಾವಾಗಲೂ ದುರಲೋಚನೆ ಕೆಟ್ಟ ಆಲೋಚನೆಗಳನ್ನು ಮಾಡುವವರ ಜೊತೆ ಸಹವಾಸ ಬೆಳೆಸಬಾರದು. ಅಂದರೆ ಯಾವುದೇ ಹಾವುಗಳಿದ್ದರೂ ಅವುಗಳಲ್ಲಿನ ವಿಷವು ಒಂದೇ ಆಗಿರುತ್ತದೆ. ಆದ್ದರಿಂದ ಕೆಟ್ಟ ಆಲೋಚನೆಗಳನ್ನು ಉಳ್ಳವರು ಕೂಡ ಹಾಗೆಯೇ ಇರುತ್ತಾರೆ. ಅಂಥವರ ಸಂಗ ಮಾಡಬಾರದು ಏಕೆಂದರೆ ಅವರ ಮನಸ್ಸಿನ ಆಂತರ್ಯ ಶುದ್ಧತೆಯಿಂದ ಕೂಡಿರುವುದಿಲ್ಲವಾಗಿ ಅಂತಹ ಮನಸ್ಥಿತಿ ಹೊಂದಿರುವವರನ್ನು ಭಯಂಕರ ವಿಷ ಸರ್ಪದಲ್ಲಿರುವ ವಿಷದಂತೆ ಕೂಡಲಸಂಗಮದೇವ ಎಂದಿದ್ದಾರೆ. 

ಹಬ್ಬಕ್ಕೆ ತಂದ ಹರಕೆಯ ಕುರಿ 
ತೋರಣಕ್ಕೆ ತಂದ ತಳಿರ ಮೇಯಿತ್ತು! 
ಕೊಂದಹರೆಂಬುದನರಿಯದೆ 
ಬೆಂದೊಡಲ ಹೊರೆವುತ್ತಲಿದೇ? 
ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು!! 
ಕೊಂದವರುಳಿದವರೆ ಕೂಡಲಸಂಗಮದೇವಾ.
ಭೂಮಿಯ ಮೇಲೆ ಮನುಷ್ಯನಿಗೆ ಬದುಕುವ ಹಕ್ಕು ಎಷ್ಟಿದೆಯೋ ಹಾಗೆ ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕು ಅಷ್ಟೇ ಇದೆ.
ಹಬ್ಬಕ್ಕೆ ಬಲಿ ಕೊಡಲೆಂದು ತಂದ ಕುರಿ ಯಾವುದರ ಪ್ರಜ್ಞೆಯೂ ಇಲ್ಲದೆ ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ಅಲ್ಲೇ ಸಿಂಗರಿಸಿರುವ ತಳಿರು ತೋರಣವನ್ನು ತಿನ್ನುತ್ತದೆ. ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಆದರೆ ತದನಂತರ ಮನುಷ್ಯ ತನ್ನನ್ನು ಸಾಯಿಸಿ ಊಟ ಮಾಡುತ್ತಾರೆ ಎಂಬ ಅರಿವು ಕೂಡ ಅದಕ್ಕಾಗಲ್ಲ. ಇದರಂತೆ ಹುಟ್ಟು ಸಾವು ಎಂಬವು ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಭವಿಸುವಂತಹವೇ. ಕುರಿಯನ್ನು ಬಲಿಕೊಡುವ ಮಾನವನು ಸಾವುಕಾಣದ ಚಿರಂಜೀವಿಯೇ? ಅವನು ಕೂಡ ಒಂದು ದಿನ ಸಾಯುತ್ತೇನೆ ಎಂದು ತಿಳಿದಿದ್ದರು ಮತ್ತೊಂದು ಅಥವಾ ಮತ್ತೊಬ್ಬರ ಮೇಲೆ ದಯೆಯನ್ನು ಹೊಂದಿಲ್ಲದಂತೆ ಕಾಣುತ್ತಾನೆ. ಇದರಿಂದ ಮಾನವನಿಗೆ ಪ್ರತಿಯೊಬ್ಬರ ಬಗ್ಗೆ ದಯೆ ಇರಬೇಕು.

ದಯವಿಲ್ಲದ ಧರ್ಮವದ್ಯಾವುದಯ್ಯಾ?
 ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ! 
ದಯವೇ ಧರ್ಮದ ಮೂಲವಯ್ಯ 
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!
ಪ್ರಪಂಚದ ಮೇಲಿರುವ ಪ್ರತಿಯೊಂದು ಧರ್ಮದ ಮೂಲ ದಯೆ, ಅದನ್ನೇ ಪ್ರತಿಪಾದಿಸುತ್ತದೆ. ಇಂತಹ ದಯೆ, ಕರುಣೆ , ವಾತ್ಸಲ್ಯ ಹೊಂದಿರದ ಯಾವ ಧರ್ಮಗಳು ಪ್ರಪಂಚದ ಮೇಲಿಲ್ಲ. ಈ ದಯೆಯು ಎಲ್ಲಾ ಪ್ರಾಣಿ ಪಕ್ಷಿಗಳ ಮೇಲು ಇರಬೇಕು. ಅಂತಹ ದಯೆ ಎಲ್ಲಾ ಧರ್ಮಗಳ ಮೂಲ ಎಂದು ಸಾರಿದೆ.

ಅಲ್ಲಮಪ್ರಭು
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು
 ಬುದ್ದಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದೆನಯ್ಯ 
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು
 ಬುದ್ದಿಯ ಕಲಿಸಿದರೆ, ಆಗಲಿ ಮಹಾಪ್ರಸಾದನೆಂದನಯ್ಯ 
ದ್ವಾಪರ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ 
ಬುದ್ದಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದೆನಯ್ಯ 
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ, ಆಗಲಿ ಮಹಾಪ್ರಸಾದವೆಂದೆನಯ್ಯ 
ಗುಹೇಶ್ವರ, ನಿಮ್ಮ ಕಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು
ಅಲ್ಲಮಪ್ರಭುವಿನ ವಚನಗಳು ಗುರುವಿನ ಮಹತ್ವವನ್ನು ತಿಳಿಸುವ ವಚನಗಳಾಗಿವೆ. ಇದರಿಂದ ಗುರುವಿನ ಸ್ಥಾನ ಅವನ ಅರಿವು, ಜ್ಞಾನ, ತಿಳುವಳಿಕೆ ಎಲ್ಲವನ್ನು ತಿಳಿಯಬಹುದು. 
ವಚನವು ಒಂದೊಂದು ಯುಗ ಕಳೆದಂತೆಲ್ಲ ಮತ್ತೊಂದು ಯುಗ ಬಂದಂತೆಲ್ಲ ಮನುಷ್ಯನ ಹರಿವು ಹೆಚ್ಚುತ್ತಾ ಬಂದಿರುವುದನ್ನು, ಅದರ ಜೊತೆಗೆ ಮಾನವೀಯತೆಯ ಗುಣಗಳನ್ನು ವಿವಚನದಲ್ಲಿ ಕಾಣಬಹುದು. ಇಲ್ಲಿ ಗುರು ಶಿಷ್ಯರ ನಡುವಿನ ಅನುಸಂಧಾನ ಅಥವಾ ವಿದ್ಯೆಯ ಸರಬರಾಜು ಮತ್ತು ಶಿಷ್ಯ ಹೇಗೆ ಸ್ವೀಕರಿಸುತ್ತಿದ್ದ ಎಂಬುದನ್ನು ತೋರಿಸುತ್ತದೆ. ಕೃತಯುಗ ಅಥವಾ ದೇವರ ಯುಗದಲ್ಲಿ ಶಿಷ್ಯನಿಗೆ ವಿದ್ಯೆ ಅಥವಾ ಬುದ್ಧಿಯನ್ನು ಗುರು ಕಲಿಸುವಾಗ ಹೊಡೆದು ಕಲಿಸುತ್ತಿದ್ದ ವಿದ್ಯಾರ್ಥಿಯಾದ ಮಹಾಪ್ರಸಾದವೆಂದು ಸ್ವೀಕರಿಸುತ್ತಿದ್ದ. ತ್ರೇತಾಯುಗ ಅಥವಾ ರಾಮಾಯಣ ಕಾಲದಲ್ಲಿ ಶಿಷ್ಯನಿಗೆ ಬುದ್ಧಿ ಅಥವಾ ವಿದ್ಯೆಯನ್ನು ಗುರು ಕಲಿಸುವಾಗ ಅವನಿಗೆ ಬಯ್ಯುವ ಮೂಲಕ ಕಲಿಸುತ್ತಿದ್ದ ಶಿಷ್ಯನು ಮಹಾಪ್ರಸಾದ ಎಂದು ಸ್ವೀಕರಿಸುತ್ತಿದ್ದ. ದ್ವಾಪರಯುಗ ಅಥವಾ ಮಹಾಭಾರತದ ಕಾಲದಲ್ಲಿ ಶಿಷ್ಯನಿಗೆ ಬುದ್ಧಿ ಅಥವಾ ವಿದ್ಯೆಯನ್ನು ಕಲಿಸುವಾಗ ಗುರು ಹೆದರಿಸಿ ಅಥವಾ ಝಂಕಿಸಿ ಬುದ್ಧಿಯ  ಕಲಿಸುತ್ತಿದ್ದ ಶಿಷ್ಯ ಮಹಾಪ್ರಸಾದ ಎಂದು ಸ್ವೀಕರಿಸುತ್ತಿದ್ದ. ಕಲಿಯುಗದಲ್ಲಿ ಗುರು ಶಿಷ್ಯನಿಗೆ ವಿದ್ಯೆ ಕಲಿಸುವಾಗ ಅವನಿಗೆ ನಮಸ್ಕರಿಸಿ ವಿದ್ಯೆ ಕಲಿಸುತ್ತಿದ್ದ ಇಂತಹ ಕಲಿತನಕ್ಕೆ ನಾ ಬೆರಗಾದನು ಎಂದು ಹೇಳುವಲ್ಲಿ ವಚನವು ಶಿಷ್ಯನ ಸ್ಥಾನಮಾನ ಯುಗದಿಂದ ಯುಗಕ್ಕೆ ಗುರುವಿನ ಮಟ್ಟಕ್ಕೆ ಬಂದದ್ದನ್ನು ಕಾಣಬಹುದು. ಹಾಗೆಯೇ ಇನ್ನೊಂದು ಅರ್ಥದಲ್ಲಿ ಗುರುವಿನ ಸ್ಥಾನ ಕೆಳಗಿಳಿಯುವುದನ್ನು ಕಾಣಬಹುದು.


ಅಯ್ಯಾ ನೀನೆನಗೆ ಗುರುವಪ್ಪಡೆ. ನಾ ನಿನಗೆ ಶಿಷ್ಯನಪ್ಪಡೆ 
ಎನ್ನ ಕರಣಾದಿ ಗುಣಂಗಳ ಕಳೆದು 
ಎನ್ನ ಕಾಯದ ಕರ್ಮವ ತೊಡೆದು, 
ಎನ್ನ ಪ್ರಾಣದ ಧರ್ಮ ನಿಲಿಸಿ, 
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ, 
ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು 
ಕಾರುಣ್ಯವ ಮಾಡಾ ಗುಹೇಶ್ವರಾ.
ಗುರುವಿನ ಶ್ರೇಷ್ಠತೆಯನ್ನು ಈ ವಚನದಲ್ಲಿ ಹೇಳಲಾಗುತ್ತದೆ ನೀನು ನನಗೆ ಗುರುವಾದರೆ ನಾನು ನಿನಗೆ ಶಿಷ್ಯನಾಗುವೆ ಆಗ ನನ್ನಲ್ಲಿ ನ ಇಂದ್ರಿಯ ಸುಖಗಳನ್ನು ತೆಗೆದುಹಾಕು ನನ್ನ ದೇಹದ ನಿರ್ಮಾಣದಿಂದ ಆಗುವ ಕೆಟ್ಟ ಕೆಲಸಗಳನ್ನು ತೊಡೆದು ಹಾಕಿ, ನನ್ನ ಪ್ರಾಣದ ಸ್ಥಾಪನೆಯ ಉದ್ದೇಶವನ್ನು ಪೂರೈಸಲು ನೀನು ದೇಹದ ಮೂಲಕವಾಗಿ, ನೀನು ನನ್ನ ಪ್ರಾಣದ ಮೂಲಕ, ನನ್ನ ಮನಸ್ಸಿನ ಮೂಲಕವಾಗಿ ನನ್ನ ಅಂಗೈಗೆ ಬಂದು ಸೇರಿ ನನಗೆ ಸನ್ಮಾರ್ಗ ತೋರು ಎಂದು ಕೇಳಿಕೊಳ್ಳುತ್ತಿದ್ದಾನೆ.

ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯಾ 
ಗುರುಹಿರಿಯರು ತೋರಿದ ಉಪದೇಶದಿಂದ 
ವಾಗ್‌ದ್ವತವ ಕಲಿತು ವಾದಿಪರಲ್ಲದೆ 
ಆಗು-ಹೋಗೆಂಬುದನರಿಯರು! 
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು. 
ಮತ್ತೂ ವಾದಕೆಳಿಸುವರು ಹೋದರು, 
ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ!
ಗುರುವಿನಿಂದ ಪಡೆದ ವಿದ್ಯೆಯನ್ನು ನಾವು ಬಳಸಿಕೊಳ್ಳುವ ರೀತಿಯಲ್ಲಿ ಈ ವಚನದಲ್ಲಿ ಹೇಳಲಾಗಿದೆ. ಈ ವಚನದಲ್ಲಿ ಗುರುವಿನ ಮೂಲಕ ಕಲಿತ ಓದು ಬರಹದಿಂದ ಅಹಂಕಾರವನ್ನು ಹೆಚ್ಚಿಸಿಕೊಂಡು ಇತರರನ್ನು ಕೀಳಾಗಿ ನೋಡುವ ಮೂಲಕ, ಮಾತಿನ ಜಾಣ್ಮೆಯಿಂದ ತನ್ನದೇ ಸರಿ, ನನ್ನ ಮಾತೇ ಸರಿ, ಎಂದು ನಿಲುವು ತಳೆಯುತ್ತಾರೆ ಹೊರತು ಲೋಕದ ತಿಳುವಳಿಕೆ ಬಗೆಗೆ ತಿಳಿದಿಲ್ಲದವರಾಗಿ ಎರಡು ಮಾತನಾಡುವ ಮೂಲಕ ಒಳ್ಳೆಯ ನಡೆ-ನುಡಿ ಗೊತ್ತಿರದವರು,  ಒಳ್ಳೆಯ ರೀತಿಯಲ್ಲಿ ಬದುಕನ್ನು ನಡೆಸದವರು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದವರು, ತಮ್ಮ ಮಾತೇ ಸರಿ ಎಂದು ವಾದ ಮಾಡುವವರು ಮಾರಿದೇವತೆಯ ಕ್ರೂರ ನೋಟಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗುತ್ತಾರೆ ಎಂದು ಹೇಳಿದ್ದಾರೆ.

ಅಕ್ಕಮಹಾದೇವಿ
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು 
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು 
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು 
ಅರಿವು ಕಣ್ಣೆರೆಯದವರಲ್ಲಿ ಆರತಿಯನೊಲ್ಲೆಯ್ಯ ನೀನು 
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು 
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು 
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು 
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು 
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ 
ಹೇಳಾ ಚೆನ್ನಮಲ್ಲಿಕಾರ್ಜುನಯ್ಯ!
ಅಕ್ಕಮಹಾದೇವಿ ಒಳ್ಳೆಯ ನಡೆ-ನುಡಿ ಹೊಂದಿರದ ವ್ಯಕ್ತಿಗಳಿಂದ ಪಡೆಯುವ ಅಥವಾ ನೀಡುವ ವಸ್ತುಗಳು ಬಹು ಬಗೆಯಿಂದ ಮಾಡುವ ಪೂಜೆಯನ್ನು ಒಪ್ಪಲ್ಲ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದಾರೆ. ದೇಹದ ಮೂಲಕ ಕೆಲಸ ಮಾಡದವರಿಂದ ಮಜ್ಜನವನ್ನು ಒಪ್ಪುವುದಿಲ್ಲ, ಇತರ ನೋವಿಗೆ ಮನ ಕರಗದವರಿಂದ ಮನಸ್ಸಿನಂತೆ ಮೃದುವಾಗಿರುವ ಪುಷ್ಪವನ್ನು ಒಪ್ಪುವುದಿಲ್ಲ, ನಂಬಿಕೆಗೆ ಯೋಗ್ಯರಲ್ಲದವರಿಂದ ಸುವಾಸನಾ ಭರಿತವಾದ ಗಂಧಾಕ್ಷತೆ ಒಪ್ಪಿಸಿದರು ಒಪ್ಪುವುದಿಲ್ಲ, ಲೋಕದ ತಿಳುವಳಿಕೆ ಇಲ್ಲದವರ ಬಳಿ ತಿಳುವಳಿಕೆಯನ್ನು ಪಡೆಯುವುದಿಲ್ಲ, ಮನಸ್ಸು ಅಥವಾ ಸಮಾಜಕ್ಕೆ ಒಳಿತು ಮಾಡಬೇಕೆಂಬ ತುಡಿತವಿಲ್ಲದವರಿಂದ ಧೂಪವನ್ನು ಪಡೆಯುವುದಿಲ್ಲ,  ಸಮಾಜಕ್ಕೆ ಹಾನಿ ಮಾಡುವವರಿಂದ ನೈವೇದ್ಯ ಪಡೆಯಲ್ಲ, ತ್ರಿಕರಣ ಅಂದರೆ ಕಾಯ, ವಾಚ, ಮನಸಾ, ಶುದ್ದವಿಲ್ಲದವರಲ್ಲಿ ತಾಂಬೂಲನು ಪಡೆಯುವುದಿಲ್ಲ, ಸಂಕುಚಿತ ಮನಸ್ಸಿನಿಂದ ಕೂಡಿದವರಲ್ಲಿ ನೆಲೆಸಲು ಒಪ್ಪುವುದಿಲ್ಲ, ಅಂತದ್ದರಲ್ಲಿ ನನ್ನಲ್ಲಿ ಏನು ಉಂಟೆಂದು ನನ್ನ ಕರಸ್ಥಲದಲ್ಲಿ ಬಂದು ನೆಲೆಸಿರುವೆ ಹೇಳು ಚೆನ್ನಮಲ್ಲಿಕಾರ್ಜುನ. 

ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ 
ನೆಳಲ ತಂಪಿನಲ್ಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯಾ 
ಚೆನ್ನಮಲ್ಲಿಕಾರ್ಜುನಯ್ಯಾ 
ನಿಮ್ಮ ಕರುಣದ ಕಂದನೊಡನೆ 
ಸೂನೆಗಾರರ ಮಾತನಾಡಿಸುವರೆ ಅಯ್ಯಾ! 
ಅನ್ನವ ನೀಡುವವರಿಂಗೆ ಧಾನ್ಯವೆಸೆವ ಲೋಕ 
ಅರ್ಥವ ಕೊಡುವವರಿಂಗ ಪಾಷಾಣವೆಸೆವ ಲೋಕ 
ಹೆಣ್ಣು ಹೊನ್ನು ಮಣ್ಣು ಮೂರನೂ 
ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ, 
ಕೈಯಲಿ ಮುಟ್ಟಿ ಮಾಡುವ ಭಕ್ತಿ 
ಸಣ್ಣವರ ಸಮಾರಾಧನೆಯಾಯಿತ್ತು. 
ತನ್ನನಿತ್ತು ತುಷ್ಟಿಪಡೆವರನೆನಗೆ ತೋರಾ 
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ!
ಅಮೃತವನ್ನು ಸೇವಿಸಬೇಕಾಗಿರುವ ಶಿಶುವಿಗೆ ಅಂದರೆ ಒಳ್ಳೆಯ ವಿಚಾರಗಳನ್ನು ಪಡೆದು ಬೆಳೆಯುವ ಶಿಶುವಿಗೆ ಕೆಟ್ಟ ವಿಚಾರಗಳನ್ನು ತುಂಬಿಸಲಾಗುತ್ತಿದೆ, ಹಾಗೆಯೇ ಹಿರಿಯರ ಬಳಿಯಲ್ಲಿ ಬೆಳೆಯುವ ಮಗುವಿಗೆ ಕೆಟ್ಟ ವಿಚಾರಗಳನ್ನು ತಲುಪದಂತೆ ನೋಡಿಕೊಂಡು ಬೆಳೆಸಬೇಕು ಅಂತಹ ಸಂದರ್ಭದಲ್ಲಿ ಹಿಡಿತವಿಲ್ಲದಂತೆ ಮಗು ಬೆಳೆಯುತ್ತಿದೆ ನೋಡು ಚೆನ್ನಮಲ್ಲಿಕಾರ್ಜುನ ಎಂದಿದ್ದಾರೆ. ನಿಮ್ಮ ದಯೆ ಪ್ರೀತಿಯಿಂದ ಬೆಳೆದಿರುವ ಮಗುವಿಗೆ ಕಟುಕರ ಜೊತೆ ಸಹವಾಸ ಬೆಳೆಸುವುದೇ, ಅನ್ನದಾನ ಮಾಡುವವರಿಗೆ ಧಾನ್ಯವೇ ಸಿಗದಂತೆ, ಹಣಕಾಸಿನ ಸಹಾಯ ಮಾಡುವವರಿಗೆ ದಾನ ಮಾಡದಂತೆ ವಿಷಯವನ್ನು ಹಾಕುವ ಲೋಕವಾಗಿದೆ. ಅದರೊಂದಿಗೆ ಹೆಣ್ಣು ಹೊನ್ನು ಮಣ್ಣು ಎಂದು ಅದರ ಹಿಂದೆ ಹೋಗುವ ಸಣ್ಣತನ ಹೊಂದಿರುವ ಮನುಷ್ಯರಿಗೆ ತನ್ನನ್ನು ನೀಡುವ ಮೂಲಕ ಅವರ ತೃಪ್ತಿ ಪಡೆಯುವಂತವರನ್ನು ತೋರು ಎಂದು ಕೇಳಿದ್ದಾಳೆ.




 













 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು