ಪಂಪಯುಗ
ಪಂಪಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ.
ರಾಜಕೀಯವಾಗಿ
10 ಮತ್ತು 12ನೇ ಶತಮಾನದ ನಡುವಿನ ಕಾಲಘಟ್ಟವನ್ನು ಪಂಪಯುಗವೆಂದು ಹೇಳಲಾಗಿದೆ. ಇಲ್ಲಿ ರಾಷ್ಟ್ರಕೂಟ ರಾಜಮನೆತನವು ಉತ್ತುಂಗಕ್ಕೇರಿ, ಅಧಃಪತನದತ್ತ ಸಾಗಿದ್ದನ್ನು ಪ್ರಮುಖವಾಗಿ ಗುರುತಿಸಬಹುದು. ಈ ಮನೆತನದ ಅಮೋಘವರ್ಷನು ಪ್ರಸಿದ್ಧಿ ಪಡೆದು, ಸಾಮ್ರಾಜ್ಯ ವಿಸ್ತರಣೆಯೂ ಆಯಿತು. ನಂತರ ತಲಕಾಡಿನ ಗಂಗರೂ, ವೇಮುಲವಾಡದ ಚಾಳುಕ್ಯರು ಇವರ ಮಾಂಡಳೀಕರಾಗಿ ಇವರ ರಾಜ್ಯದ ಆಧಾರ ಸ್ತಂಭಗಳಾಗಿದ್ದರು.
ನಂತರದಲ್ಲಿ ರಾಷ್ಟ್ರಕೂಟರ ನಾಶದ ನಂತರ ಮತ್ತೆ ಬಾದಾಮಿ ಚಾಳುಕ್ಯ ವಂಶಸ್ಥರು ಮತ್ತೆ ಸ್ವಂತತ್ರರಾಗಿ ಆಳ್ವಿಕೆ ಮಾಡಿದರು. ಇದೆ ಕಾಲಘಟ್ಟದಲ್ಲಿ ಗಂಗರ ನಾಶ. ಚೋಳರ ಪ್ರಾಬಲ್ಯ ಹೆಚ್ಚಾಯಿತು. ಇದರಿಂದ ಬಾದಾಮಿ ಚಾಳುಕ್ಯ ಮತ್ರು ಚೋಳರ ನಡುವೆ ಕಾಳಗಗಳು ನಡೆದು ರಾಜಕೀಯ ಅಸ್ತಿರತೆಯನ್ನು ಕಂಡ ಯುಗವಾಗಿದೆ. ನಂತರ ಚೋಳರನ್ನು ಹಿಮ್ಮೆಟ್ಟಿಸಿ ವಿಕ್ರಮಾದಿತ್ಯ - ೬ ಮತ್ತೆ ಕರ್ನಾಟಕದ ರಕ್ಷಕನಾದನು.
ಧಾರ್ಮಿಕವಾಗಿ
ಧಾರ್ಮಿಕ ದೃಷ್ಟಿಯಿಂದಲೂ ಅಸ್ಥಿರತೆಯನ್ನು ಈ ಕಾಲದಲ್ಲಿ ಕಾಣಬಹುದು ಜೈನ ಧರ್ಮ ಪ್ರಬಲವಾದ ಧರ್ಮವಾಗಿ ಕಂಡು ಬಂದರೂ, ಅದಕ್ಕೆ ರಾಜಾಶ್ರಯ ದೊರೆತಿದ್ದು ಬಳಿಕ ಕ್ಷೀಣಿಸುತ್ತಾ ಬಂದಿತು. ಏಕೆಂದರೆ ಶೈವ ವೈಷ್ಣವ ಧರ್ಮಗಳ ಏಳ್ಗೆಯು ಇದೇ ಕಾಲದಿಂದ ಬೆಳವಣಿಗೆಗೊಳ್ಳಲು ಮುಂದಾಯಿತು. ಕಾರಣ ಬಾದಾಮಿ ಚಾಲುಕ್ಯರು ರಾಷ್ಟ್ರಕೂಟರ ಅವನತಿಯ ನಂತರ ಚೋಳರ ಪ್ರಾಬಲ್ಯ ಬೆಳೆದು ಶೈವರಾಧಕರಾಗಿ ನಿರ್ಮಾಣಗೊಂಡರು. ಜೊತೆಗೆ ರಾಮಾನುಜರು ಮೇಲುಕೋಟೆಯಲ್ಲಿ ನೆಲೆಸಿ ವೈಷ್ಣವ ಧರ್ಮಕ್ಕೆ ಪ್ರೋತ್ಸಾಹ ನೀಡಿದರು. ಅದರೊಂದಿಗೆ ದೊಡ್ಡ ಪೆಟ್ಟಾದದು ಗಂಗರ ಅವನತಿಯು ಕೂಡ ಒಂದು. ನಂತರ ಚೋಳರ ಪ್ರಾಬಲ್ಯ ಅಳಿಸಿ ಚಾಲುಕ್ಯರು ಮತ್ತೆ ಅಧಿಕಾರಕ್ಕೆ ಬಂದಾಗ ಜೈನ ಧರ್ಮಕ್ಕೆ ಪ್ರೋತ್ಸಾಹ ನೀಡಿದರು. ಇದರ ಕಾರಣವಾಗಿ ಈ ಕಾಲದಲ್ಲಿ ಬಂದ ಕವಿಗಳು ಲೌಕಿಕ ಮತ್ತು ಆಗಮಿಕ ಎಂಬ ವಿಭಾಗ ಮಾಡಿಕೊಂಡು ಕೃತಿ ರಚಿಸುವ ಮೂಲಕ ಧಾರ್ಮಿಕ ಭಾವನೆಯನ್ನು ಬೆಳೆಸಲು ಮುಂದಾದರು ಎಂಬ ಅಂಶವು ಕಾಣುತ್ತದೆ.
ಈ ಯುಗದ ವೈಶಿಷ್ಟ್ಯಗಳು
೧. ಈ ಕಾಲದಲ್ಲಿದ್ದ ಕವಿಗಳು ಬಹುಪಾಲು ಜೈನ ಮತೀಯರೇ. ಅವರೊಂದಿಗೆ ಸ್ವತಂತ್ರ ಕಾವ್ಯಗಳನ್ನು ರಚಿಸಿ ತಮ್ಮ ಕಾವ್ಯಗಳಲ್ಲಿ ವೀರ ರಸವನ್ನು ಮೆರೆದಿದ್ದಾರೆ. ಅದರ ಜೊತೆಗೆ ಕೆಲವು ಬ್ರಾಹ್ಮಣ ಕವಿಗಳು ಕೂಡ ಇದ್ದರು.
೨. ಕಾವ್ಯ ವಿಷಯ ಮತ್ತು ಕಾವ್ಯ ರಚನೆಯಲ್ಲಿ ಲೌಕಿಕ ಮತ್ತು ಆಗಮಿಕ ವಿಭಾಗಗಳನ್ನು ಮಾಡಿಕೊಳ್ಳಲಾಯಿತು.ಇದನ್ನು ರತ್ನತ್ರಯರಾದ ಪಂಪ, ಪೊನ್ನ, ರನ್ನರು ಅನುಸರಿಸಿದ್ದಾರೆ ಇಲ್ಲಿ ಲೌಕಿಕ ಎಂದರೆ ಆಶ್ರಯದಾತನ ಚರಿತ್ರೆ, ಕಾಲಘಟ್ಟ, ರಾಜಕೀಯ ವಿಷಯಗಳನ್ನು ಒಳಗೊಂಡಿರುತ್ತದೆ. ಆಗಮಿಕ ಎಂದರೆ ತೀರ್ಥಂಕರರು, ಚಕ್ರವರ್ತಿಗಳು, ಮಹಾಪುರುಷರ ಜೀವನ ಚರಿತ್ರೆಗಳು ಅಥವಾ ಧಾರ್ಮಿಕ ವಿಚಾರಗಳನ್ನು ಒಳಗೊಂಡಿರುತ್ತದೆ.
೩ ಈ ಯುಗದಲ್ಲಿ ಚಂಪು ಪ್ರಾಬಲ್ಯ ಪಡೆಯಿತು. ಪದ್ಯ-ಗದ್ಯ- ವರ್ಣನೆಗಳಿಂದ ಕೂಡಿದ್ದು, ಸಂಸ್ಕೃತದಿಂದ ಬಂದರು ದೇಶಿಯ ತ್ರಿಪದಿ- ಅಕ್ಕರ- ರಗಳೆಗಳು ಸೇರಿ ಕನ್ನಡ ಚಂಪುವಾಗಿ ಬದಲಾವಣೆ ಹೊಂದಿತು.
೪. ಈ ಯುಗದ ಕಾವ್ಯಗಳಲ್ಲಿ ನವರಸಗಳ ಬಳಕೆ ಹೆಚ್ಚಾಯ್ತು. ಇಲ್ಲಿ ಲೌಕಿಕ ಕೃತಿಗಳಲ್ಲಿ ವೀರ ರೌದ್ರ ರಸಗಳನ್ನು, ಆಗಮಿಕ ಕೃತಿಗಳಲ್ಲಿ ಅದ್ಭುತ - ಶಾಂತರಸವನ್ನು ನೋಡಬಹುದು. ನಾಗವರ್ಮನ ಕಾದಂಬರಿಯಲ್ಲಿ ಮಾತ್ರ ಶೃಂಗಾರಕ್ಕೆ ಪ್ರಾಶಸ್ತ್ಯ ಸಿಕ್ಕಿರುವುದನ್ನು ಕೂಡ ನಾವು ಗಮನಿಸಬಹುದು.
೫. ಮಾರ್ಗ-ದೇಶಿಗಳ ಸಂಗಮದಲ್ಲಿ ದೇಸಿಗೆ ಮನ್ನಣೆ ನೀಡಲು ಮುಂದಾಗಿದ್ದಾರೆ. ಅದರೊಂದಿಗೆ ಸಂಸ್ಕೃತ ಕಾವ್ಯಗಳ ಪ್ರಭಾವ ಹೆಚ್ಚಿದ್ದರೂ ಅದರಿಂದ ಬಿಡಿಸಿಕೊಂಡು ಸ್ವತಂತ್ರ ರಚನೆಯಂತೆಯೇ ಕಾಣುತ್ತದೆ.
೬. ಪ್ರೌಢ ಕಾವ್ಯಗಳ ಕಥಾ ಸರಣಿ, ಭಾಷೆಯಿಂದ ಕಥಾ ಸಾಹಿತ್ಯದ ಮೂಲಕ ಜನಮಾನಸಕ್ಕೆ ತಮ್ಮ ಕಾವ್ಯದ ತತ್ವ, ಧರ್ಮ ತತ್ವಗಳನ್ನು ತಿಳಿಸುವ ಇರಾದೆಯನ್ನು ಸಾರ್ಥಕ ಮಾಡಿಕೊಳ್ಳುತ್ತಿದ್ದರು.
೭.ಗದ್ಯಕಥಾ - ಗದ್ಯಪ್ರಕಾರದ ವಿಶೇಷತೆ ಈ ಕಾಲದಲ್ಲಿ ಶುರುವಾಯಿತು. ಉದಾಹರಣೆಯಾಗಿ ಚಾವುಂಡರಾಯ ಪುರಾಣವನ್ನು ನೋಡಬಹುದು.
೮. ಈ ಕಾಲದಲ್ಲಿ ನಾಟಕಗಳಿಲ್ಲ ಎಂಬುದಕ್ಕೆ ಅಪವಾದವಾಗಿ ಸೋನುಬೋವ ಮಾದಿಮಯ್ಯ ಎಂಬ ಕಾವ್ಯ ನಾಟಕಕಾರನಿದ್ದನೆಂಬ ಶಾಸನವೊಂದರ ಉಲ್ಲೇಖವಿದೆ.
೯. ಈ ಕಾಲದ ಬ್ರಾಹ್ಮಣ ಕವಿಗಳು ಸಂಸ್ಕೃತದಿಂದ ಅನುವಾದಿತ ಕೃತಿಗಳ ರಚನೆ ಮಾಡುತ್ತಿದ್ದರು. ಚಂದ್ರಚೂಡಾಮಣಿ ಶತಕ ಮಾತ್ರ ಸ್ವತಂತ್ರ ರಚನೆಯಾಗಿದೆ.
೧೦. ಛಂದಸ್ಸು, ವ್ಯಾಕರಣ, ವಸ್ತುಕೋಶ, ಮೊದಲಾದವುಗಳಿಗೆ ಸಂಬಂಧಿಸಿದಂತೆ ಕಾವ್ಯಗಳು ಈ ಕಾಲದಲ್ಲಿ ರಚನೆಯಾಗಿವೆ.
೧೧. ಇದೇ ಕಾಲದಲ್ಲಿ ವಚನ ಸಾಹಿತ್ಯವು ಇಂದಿರಬಹುದೆಂಬ ಹೇಳಿಕೆಯು ಇದೆ.
ಪಂಪ
ಕನ್ನಡದಲ್ಲಿ ಇವನಿಗಿಂತ ಮೊದಲಿನ ಕಾವ್ಯಗಳು ದೊರೆಯದಿರುವ ಕಾರಣ ಈತನೇ ಆದಿಕವಿ ಮತ್ತು ಇವನ ಕಾವ್ಯಗಳೇ ಮೊದಲ ಕಾವ್ಯಗಳಾಗಿವೆ. ಇದೇ ರೀತಿ ವಾಲ್ಮೀಕಿ ಸಂಸ್ಕೃತಕ್ಕೆ ಆದಿಕವಿ ಅಂತೆ ಈತನು ಕನ್ನಡಕ್ಕೆ ಆದಿ ಕವಿಯಾಗಿದ್ದಾನೆ. ಪಂಪನ ಕವಿಯಂತೆ ಕಲಿಯು ಆಗಿದ್ದನು ಕಲಿಯೋ ಸತ್ಕವಿಯೋ ಕವಿತಾಗುಣಾಣವಂ ಎಂದು ಕರೆದುಕೊಂಡಿದ್ದಾನೆ. ಇವನು ಮತದಿಂದ ಜೈನ ಧರ್ಮೀಯನು ಪರಂಪರೆಯಿಂದ ವೈದಿಕ ಪರಂಪರೆಯವನು. ಇವನ ತಂದೆ ಜೈನ ಧರ್ಮ ಸ್ವೀಕಾರದ ಮೂಲಕ ಎರಡು ಧರ್ಮಗಳಲ್ಲೂ ಸಮನ್ವಯತೆ ಕಂಡುಕೊಂಡ ಅದಕ್ಕೆ ಒಂದು ಮಾತು "ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ" ಎಂಬಂತೆ ಎರಡು ಧರ್ಮಗಳ ಪಾಲನೆಯನ್ನು ಮಾಡಿದ್ದಾನೆ.
ಆಶ್ರಿತ ರಾಜ- ಚಾಲುಕ್ಯ ದೊರೆ ಎರಡನೇ ಅರಿಕೇಸರಿ.ಅವನು ವೆಂಗಿಮಂಡಲದ ಲೆಂಬುಳ ಪಾಠಕದಲ್ಲಿದ್ದ.
ಇವನ ಕೃತಿಗಳು.
೧. ಆದಿಪುರಾಣ -
ಇದು ಪಂಪನ ಆದಿಕೃತಿ. ಜೊತೆಗೆ ಕನ್ನಡದ ಮೊದಲ ಉಪಲಬ್ಧ ಕಾವ್ಯವು ಹೌದು.
ಆಕರ - ಜಿನಸೇನಾಚಾರ್ಯರ ಪೂರ್ವಪುರಾಣ. ಇದನ್ನು ಹಾಗೆಯೇ ಅನುಕರಿಸಿದ್ದಾನೆ. ಇದರಲ್ಲಿ ಕಾವ್ಯ ದೃಷ್ಟಿ ಹೆಚ್ಚಾಗಿದೆ.
ಚಂಪು ಪ್ರಕಾರದಲ್ಲಿ ರಚನೆಯಾಗಿದೆ. ಹಲವು ಜನ್ಮಗಳನ್ನು ಒಳಗೊಂಡು ಕೊನೆಯ ಭವದಲ್ಲಿ ಆದಿನಾಥನಾಗಿ ಕೇವಲ ಜ್ಞಾನ ಪಡೆದ ಸಿದ್ಧಿಯ ಕಥೆಯಾಗಿದೆ. "ನೆಗಳ್ದಾದಿಪುರಾಣದೊಳರಿವುದು ಕಾವ್ಯಧರ್ಮಮಂ ಧರ್ಮಮಂ" ಇದು ಪೂರ್ಣವಾಗಿ ಸಮನ್ವಯ ಕಂಡಿರುವುದು ನೀಲಾಂಜನೇಯ ನೃತ್ಯ ಪ್ರಸಂಗದಲ್ಲಿ.
ಕೆಲವು ಭವಾವಳಿಗಳು
* ಲಲಿತಾಂಗ - ಸ್ವಯಂ ಪ್ರಭೆಯ ಅತೃಪ್ತಭೋಗ
* ವಜ್ರಜಂಘ - ಶ್ರೀಮತಿಯರ ಭೋಗತೃಪ್ತಿ, ಸಹಮರಣ.
ಆದಿನಾಥನಲ್ಲಿ ಕಾಮತ್ಯಾಗ, ಭರತನಲ್ಲಿ ಅಹಂಕಾರ ತ್ಯಾಗ ಅವು - ವರಷಭಾಚಲದಲ್ಲಿ, ಬಾಹುಬಲಿಯ ಎದುರಿನಲ್ಲಿ.
* ಆದಿಪುರಾಣ ಮೊದಲ ಜೈನ ಪುರಾಣವೂ ಆಗಿದೆ ತದನಂತರ ಬಂದ ಕೃತಿಗಳಿಗೆ ದಾರಿಮಾರ್ಗವೂ ಆಗಿದೆ.
* ಭರತ ಬಾಹುಬಲಿ ನಡುವೆ ದೃಷ್ಟಿ ಯುದ್ಧ ಜಲ ಯುದ್ಧ ಮಲ್ಲಯುದ್ಧ ನಡೆದು ಬಾಹುಬಲಿ ಜಯಗಳಿಸಿ ತನ್ನ ಅಣ್ಣನ ಅಧಿಕಾರ ಮೋಹಕ್ಕೆ ಹೇಸಿ ಗೆಲುವು ಪಡೆದರು ತಾನೆ ತಪಸ್ಸಿಗೆ ಹೊರಟು ಹೋಗುತ್ತಾನೆ.
ಪಂಪ ಭಾರತ
* ಆದಿಕವಿ ಪಂಪ ವ್ಯಾಸ ಭಾರತವನ್ನು ಕನ್ನಡಿಸಿದ್ದಾನೆ.
* ಪಂಪನಿಗೆ ಮಹಾಭಾರತ ಮತ್ತು ತನ್ನ ದೊರೆಯ ಚರಿತ್ರೆ ಕೂಡಿಸುವುದಾಗಿದೆ.
* ಕಥೆ ಪಿರಿದಾದೊಡಂ ಕತೆಯ ಮೆಯ್ಗಡಲಿಯದೆ ಪೇಳ ಮುಂ ಸಮಸ್ತ ಭಾರತಮನಪೂರ್ವಮಾಗೆ ಸಲೆ ಪೇಳ್ದ ಕವೀಶ್ವರರಿಲ್ಲಿ" ಇಲ್ಲವೇ ಸಮಗ್ರ ಮತ್ತು ಸಂಕ್ಷಿಪ್ತವಾಗಿ ಮಹಾಭಾರತ ಹೇಳಿದ್ದಾನೆ.
* ಅರ್ಜುನ ಮತ್ತು ಅರಿಕೇಸರಿ ನಡುವೆ ಅಭೇದ ಕಲ್ಪಿಸಿ ಕಥೆಯನ್ನು ಹೇಳಿದ್ದಾನೆ.
* ಪಂಪ ಭಾರತಕ್ಕೆ ಮತ್ತೊಂದು ಹೆಸರಾದ ವಿಕ್ರಮಾರ್ಜುನ ವಿಜಯವೆಂದರೆ ಅರಿಕೇಸರಿಯ ವಿಜಯವೇ ಆಗಿದೆ.
ಪಂಪ ಮಾಡಿಕೊಂಡಿರುವ ವ್ಯತ್ಯಾಸಗಳು
* ಅರ್ಜುನನ ನಾಯಕತ್ವದೊಡನೆ ಸುಭದ್ರೆಗೆ ಪಟ್ಟ ಕಟ್ಟಿರುವುದು. ಎಲ್ಲ ಅಪಮಾನ, ಅವಮಾನ, ಭಾರತ ಯುದ್ಧಕ್ಕೆ ಕಾರಣಳಾದವಳು ದ್ರೌಪದಿ ಆದರೆ ಪಟ್ಟಕೇರಿದ್ದು ಸುಭದ್ರೆ. ಭೀಮನ ಮಾತು
ಅಬ್ಜದಳಾಕ್ಷೀ ಪೀಳಿ ಸಾಮಾನ್ಯಮೆ ಬಗೆಯೆ ಭವತ್ಕೇಶ ಪಾಶ ಪ್ರಪಂಚಂ ಎಂದಿದ್ದಾನೆ.
* ದ್ರೌಪದಿಗೆ ವ್ಯಾಸ ಭಾರತದಲ್ಲಿ ಐವರು ಗಂಡಂದಿರು ಇಲ್ಲಿ ಅರ್ಜುನ ಮಾತ್ರ ಗಂಡನಾಗಿದ್ದಾನೆ.
* ದ್ರೌಪದಿಯ ಪ್ರತಿಜ್ಞೆ ಈಡೇರಿಸುವವನು ಭೀಮ ಜೊತೆಗೆ ತಳೋದರಿ ಎಂದು ನಡೆಸಿಕೊಳ್ಳುತ್ತಾನೆ.
* ಕೃಷ್ಣ ಭಕ್ತಿಯ ಸನ್ನಿವೇಶ ಕಡಿಮೆಯಾಗಿದೆ ಪಂಪನಿಗೆ ಮಹಾಭಾರತ ಮಾನವ ಸಂಘರ್ಷದ ಕಥೆಯಾಗಿದೆ. ಆದರೆ ಕುಮಾರವ್ಯಾಸನಿಗೆ ಮಾನವ ಜೀವನಕ್ಕೆ ಸೂತ್ರಧಾರಕ ಶಕ್ತಿಯಾದ ಭಗವಲ್ಲಿಲಯ ವಿಳಾಸಕನಾದ ಕೃಷ್ಣನ ಕಥೆಯಾಗಿದೆ.
* ತೀ.ನಂ.ಶ್ರೀ " ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸ ಭಾರತದ ನೆರಳಲ್ಲ ಅಲ್ಲಿಯ ಚಿನ್ನವನ್ನು ಶೋಧಿಸಿ ತಂದು ಹೊಸದಾಗಿ ಎರಕಹೊಯ್ದು ಒಪ್ಪವಿಟ್ಟು ನಿಲ್ಲಿಸಿದ ಪುತ್ತಳಿ ಅದು".
* ಅವನ ಶೈಲಿ-
ಬಗೆ ಪೊಸತಪ್ಪುದಾಗಿ ಮೃಧುಬಂಧದೊಳೊಂದುವುದು
ಒಂದಿ ದೇಸಿಯೊಳ್ ಪುಗುವುದು
ಪೊಕ್ಕು ಮಾರ್ಗದೊಳೆ ತಳ್ವುದು
ತಳ್ತೊಡೆ ಕಾವ್ಯಬಂಧಮೊಪ್ಪುಗುಂ.
* ನಾಗರಾಜ - ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ
* ತೀ.ನಂ.ಶ್ರೀ - ಕನ್ನಡದ ಕಾಳಿದಾಸ ಪಂಪ ಎಂದಿದ್ದಾರೆ.
* ಮುಳಿಯ ತಿಮ್ಮಪ್ಪಯ್ಯ - ನಾಡೋಜನಾದ ಪಂಪನು ಬರಿಯ ಕವಿ ಮಾತ್ರವೇ ಅಲ್ಲ, ಸಾವಿರ ವರ್ಷಕ್ಕೆ ಹಿಂದಿನ ಕನ್ನಡ ರಾಷ್ಟ್ರೀಯ ಪುರುಷರೊಳಗೊಬ್ಬನು.
ReplyForward |
0 ಕಾಮೆಂಟ್‌ಗಳು